ಫೀನಿಕ್ಸ್ 1
 
	ಪ್ರಾಚೀನ ಈಜಿಪ್ಟ್ ಮತ್ತು ಇತರ ಪ್ರಾಚೀನ ಸಂಸ್ಕøತಿಗಳಲ್ಲಿ ಪ್ರಚಲಿತವಿದ್ದ ಕಾಲ್ಪನಿಕ ಪಕ್ಷಿ. ಇದಕ್ಕೂ ಸೂರ್ಯಪೂಜೆಗೂ ಸಂಬಂಧ ಕಲ್ಪಿಸಲಾಗಿದೆ. ಇದು ಹದ್ದಿನಷ್ಟು ದೊಡ್ಡದಿತ್ತೆಂದೂ ಕಡುಗೆಂಪು ಬಣ್ಣವುಳ್ಳದ್ದೆಂದೂ ಬಂಗಾರದ ಪುಕ್ಕಗಳುಳ್ಳದ್ದೆಂದೂ ಮಧುರವಾದ ಧ್ವನಿಯುಳ್ಳದ್ದೆಂದೂ ವರ್ಣಿಸಲಾಗಿದೆ.

	ಹೀರಾಸ್, ಪ್ಲಿನೀ ಮೊದಲಾದ ಪ್ರಾಚೀನ ಗ್ರೀಕ್ ಬರೆÁರರು ಇದರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದರ ಬಗ್ಗೆ ಅನೇಕ ದಂತಕಥೆಗಳಿವೆ. ಯಾವುದೇ ನಿರ್ದಿಷ್ಟ ಕಾಲದಲ್ಲಿ ಒಂದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಇದು ಇರುವಂತಿಲ್ಲ. ಇದರ ಜೀವಿತಾವಧಿ 500 ವರ್ಷಗಳಿಗೂ ಹೆಚ್ಚು. ತನ್ನ ಅಂತ್ಯಕಾಲ ಸಮೀಪಿಸಿದಾಗ ಇದು ಸುಗಂಧಭರಿತ ರೆಂಬೆಗಳು ಮತ್ತು ಸಂಬಾರವಸ್ತುಗಳನ್ನು ತಂದು ಗೂಡು ಕಟ್ಟಿ ಅದಕ್ಕೆ ಬೆಂಕಿ ಇಟ್ಟು ಆ ಬೆಂಕಿಗೆ ಹಾರಿ ಸುಟ್ಟುಹೋಗುತ್ತದೆ. ಆ ಚಿತೆಯಿಂದ ಅಲೌಕಿಕ ರೀತಿಯಲ್ಲಿ ಹೊಸ ಹಕ್ಕಿ ಹುಟ್ಟಿಬರುತ್ತದೆ. ಅದು ಗೋಲರಸದ ಕೋಶದಲ್ಲಿ ತಂದೆಯ ಬೂದಿಯನ್ನು ಕೊಂಡೊಯ್ದು ಈಜಿಪ್ಟಿನಲ್ಲಿರುವ ಹೀಲೊಪೊಲಿಸ್ಸಿಗೆ ಹೋಗಿ ಅಲ್ಲಿನ ಸೂರ್ಯ ದೇವಾಲಯದ ಬಲಿಪೀಠದ ಮೇಲೆ ಅದನ್ನು ಕೂಡಿಡುತ್ತದೆ. ಇದು ಒಂದು ಕಥೆ. ಇನ್ನೊಂದು ಕಥೆಯ ಪ್ರಕಾರ ಸಾಯಲುದ್ಯುಕ್ತವಾದ ಫೀನಿಕ್ಸ್ ಹೀಲೊಪೊಲಿಸ್ಸಿಗೆ ಹಾರಿಹೋಗಿ ಅಲ್ಲಿನ ಬಲಿ ಪೀಠದ ಮೇಲೆ ಉರಿಯುತ್ತಿರುವ ಬೆಂಕಿಯಲ್ಲಿ ಬಿದ್ದು ಭಸ್ಮವಾಗುತ್ತದೆ. ಆ ಚಿತಾಗ್ನಿಯಿಂದ ಹೊಸ ಮರಿಯೊಂದು ಒಡಮೂಡುತ್ತದೆ.

	ಪ್ರಾಚೀನ ಈಜಿಪ್ಟಿನವರಿಗೆ ಈ ಹಕ್ಕಿ ಮರಣ ಮತ್ತು ಪುನರುತ್ಥಾನದ ಸಂಕೇತವಾಗಿತ್ತು. ಶಾಶ್ವತವೆಂದೆನಿಸಿದ್ದ ರೋಮಿಗೆ ಇದು ಸಂಕೇತವಾಗಿತ್ತು. ರೋಮನ್ ಸಾಮ್ರಾಜ್ಯದ ಕೊನೆಕೊನೆಯ ಕಾಲದಲ್ಲಿ ಅದರ ನಾಣ್ಯಗಳ ಮೇಲೆ ಶಾಶ್ವತ ನಗರವನ್ನು ಸಂಕೇತಿಸಲು ಇದರ ಚಿತ್ರವನ್ನು ಮುದ್ರಿಸುವ ರೂಢಿ ಇತ್ತು. ಕ್ರೈಸ್ತ ಮತೀಯರಿಗೂ ಇತರ ಅನೇಕ ಮತಾನುಯಾಯಿಗಳಿಗೂ ಈ ಹಕ್ಕಿ ಧಾರ್ಮಿಕ ಸಂಕೇತವಾಗಿ ಉಳಿದು ಬಂತು.							(ಡಿ.ಎಸ್.ಜೆ.)

	ಖಗೋಳವಿಜ್ಞಾನದಲ್ಲಿ: ದಕ್ಷಿಣ ಖಗೋಳದ ನಕ್ಷತ್ರಪುಂಜ. ವಿಷುವದಂಶ 1 ಗಂ, ಘಂಟಾವೃತ್ತಾಂಶ 50º. ಇದು ಹೈಡ್ರಸ್ ಮತ್ತು ಸ್ಕಲ್ಪ್ಟರ್ ಪುಂಜಗಳ ನಡುವೆ ಇದೆ. ಇದರಲ್ಲಿ 2ನೆಯ ಕಾಂತಿವರ್ಗಕ್ಕೆ ಸೇರಿದ ಒಂದು ನಕ್ಷತ್ರವೂ ಮೂರು ಮತ್ತು ನಾಲ್ಕನೆಯ ಕಾಂತಿವರ್ಗಗಳಿಗೆ ಸೇರಿದ ಕೆಲವು ನಕ್ಷತ್ರಗಳೂ ಇವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ